Isaiah 21

ಬಾಬೆಲಿನ ವಿಷಯವಾದ ದೈವೋಕ್ತಿ

1ಸಮುದ್ರ ಹಾಗೂ ಅಡವಿಯ ವಿಷಯವಾದ ದೈವೋಕ್ತಿ.

ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ
ಅರಣ್ಯದ ಕಡೆಯ ಭಯಂಕರ ದೇಶದಿಂದ (ದೊಡ್ಡ ಅಪಾಯ) ಬರುತ್ತದೆ ಎಂಬ
2 ಘೋರದರ್ಶನವು ನನಗೆ ತಿಳಿಯ ಬಂದಿದೆ;
ಬಾಧಕನು ಬಾಧಿಸುತ್ತಿದ್ದಾನೆ, ಸೂರೆಗಾರನು ಸೂರೆಮಾಡುತ್ತಿದ್ದಾನೆ.
ಏಲಾಮೇ, ಏಳು! ಮೇದ್ಯವೇ, ಮುತ್ತಿಗೆ ಹಾಕು!
ನಿಮ್ಮ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.

3

ಆದುದ್ದರಿಂದ ನನ್ನ ಸೊಂಟದಲ್ಲಿ ನೋವು ತುಂಬಿದೆ,

ಪ್ರಸವವೇದನೆಯಂತಿರುವ ವೇದನೆಯು ನನ್ನನ್ನು ಹಿಡಿದಿದೆ,
ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ, ಕಣ್ಣು ಕುರುಡಾಗುವಷ್ಟು ತತ್ತರಗೊಂಡಿದ್ದೇನೆ.
4 ನನ್ನ ಹೃದಯವು ಬಡಿದುಕೊಳ್ಳುತ್ತಿದೆ, ನಡುಕವು ನನ್ನನ್ನು ಆವರಿಸಿಕೊಂಡಿದೆ,
ನಾನು ಅಪೇಕ್ಷಿಸುತ್ತಿದ್ದ ರಾತ್ರಿಯು ನನಗೆ ಭಯವಾಗಿ ಪರಿಣಮಿಸಿದೆ.

5

ಔತಣಕ್ಕೆ ಸಿದ್ಧಪಡಿಸಿಕೊಂಡು, ಚಾಪೆಗಳನ್ನು ಹಾಸಿಕೊಂಡು ತಿಂದು, ಕುಡಿಯುತ್ತಾರೆ;

ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿ ಸಿದ್ಧವಾಗಿ!

6

ಕರ್ತನು ನನಗೆ ಹೇಳುವುದೇನೆಂದರೆ,

<<ಹೋಗು, ಕಾವಲುಗಾರನನ್ನು ನೇಮಿಸು; ಅವನು ಕಂಡದ್ದನ್ನು ತಿಳಿಸಲಿ.
7 ಅವನು ಜೋಡಿ ಜೋಡಿಯಾಗಿ ಬರುವ ಸವಾರರ ಸಾಲನ್ನೂ,
ಕತ್ತೆಗಳ ಮತ್ತು ಒಂಟೆಗಳ ಸಾಲುಗಳನ್ನೂ ನೋಡಿದರೆ,
ಬಹಳ ಗಮನದಿಂದ ಕಿವಿಗೊಟ್ಟು ಗಮನಿಸಲಿ>> ಎಂಬುದೇ.

8

ಬಳಿಕ ಅವನು ಸಿಂಹದಂತೆ ಕೂಗಿ,

<<ಕರ್ತನೇ, ಪ್ರತಿ ದಿನವು ನಾನು ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ,
ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.
9 ಇಗೋ, ಸವಾರರು ಜೋಡಿ ಜೋಡಿಯಾಗಿ ಬರುತ್ತಾರೆ.>>
ಅವನು ಕೂಗಿ, <<ಬಾಬೆಲ್ ಬಿದ್ದು ಹೋಯಿತು, ಬಾಬೆಲ್ ಬಿದ್ದು ಹೋಯಿತು!
ಅದರ ದೇವತೆಗಳ ವಿಗ್ರಹಗಳನ್ನು ಒಡೆದು ನೆಲಸಮ ಮಾಡಿಬಿಟ್ಟರು>> ಎಂದು ಹೇಳುವನು.

10

ನನ್ನ ಕಣದ ದವಸವೇ, ನನ್ನ ಬಡಿತಕ್ಕೆ ಈಡಾದವರೇ!

ಇಸ್ರಾಯೇಲರ ದೇವರಾಗಿರುವ ಸೇನಾಧೀಶ್ವರನಾದ ಯೆಹೋವನಿಂದ,
ನಾನು ಕೇಳಿದ್ದನ್ನೇ ನಿಮಗೆ ತಿಳಿಸಿದ್ದೇನೆ.

ಎದೋಮಿನ ಬಗ್ಗೆ ದೈವೋಕ್ತಿ

11

ಎದೂಮದ ಬಗ್ಗೆ ದೈವೋಕ್ತಿ.

ಆತನು ಸೇಯೀರಿನಿಂದ ನನ್ನನ್ನು ಕರೆದು, <<ಕಾವಲುಗಾರನೇ, ಈಗ ರಾತ್ರಿ ಎಷ್ಟು ಸಮಯವಾಯಿತು? ಕಾವಲುಗಾರನೇ, ರಾತ್ರಿ ಸಮಯ ಎಷ್ಟು ಕಳೆಯಿತು
12ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ; ವಿಚಾರಿಸಬೇಕಾದರೆ ಆಮೇಲೆ ಬಂದು ವಿಚಾರಿಸಿರಿ>> ಎಂದು ಕಾವಲುಗಾರನು ಹೇಳಿದನು.

ಅರೇಬಿಯ ಬಗ್ಗೆ ದೈವೋಕ್ತಿ


13

ಅರೇಬಿಯ ವಿಷಯವಾದ ದೈವೋಕ್ತಿ.

ಓ ದೇದಾನ್ಯರೇ, ಅರೇಬಿಯದ ಮರುಭೂಮಿಯಲ್ಲಿ ಇಳಿದುಕೊಳ್ಳಿರಿ.
14 ಬಾಯಾರಿದವರಿಗೆ ನೀರನ್ನು ತಂದುಕೊಡಿರಿ,
ತೇಮಾ ದೇಶದ ನಿವಾಸಿಗಳೇ ಓಡಿ ಹೋದವರನ್ನು ರೊಟ್ಟಿಯೊಡನೆ ಎದುರುಗೊಳ್ಳಿರಿ.
15 ಏಕೆಂದರೆ ಹಿರಿದ ಕತ್ತಿ, ಬಾಗಿದ ಬಿಲ್ಲು,
ಯುದ್ಧದ ಬಾಧೆ ಇವುಗಳಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.

16

ಕರ್ತನು ನನಗೆ ಹೇಳುವುದೇನೆಂದರೆ, <<ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ಸಕಲ ವೈಭವವು ಇಲ್ಲವಾಗುವುದು.
17ಕೇವಲ ಕೆಲವೇ ಬಿಲ್ಲುಗಾರರೂ ಹಾಗೂ ಕೇದಾರಿನ ಶೂರರೂ ಉಳಿಯುವರು>> ಎಂಬುದಾಗಿ ಇಸ್ರಾಯೇಲರ ದೇವರಾದ ಯೆಹೋವನು ನುಡಿದಿದ್ದಾನೆ.

Copyright information for KanULB